ನವದೆಹಲಿ: ದೆಹಲಿಯ ಮಂಗೋಲ್‌ಪುರಿ ಕೈಗಾರಿಕಾ ಪ್ರದೇಶದಲ್ಲಿರುವ ಶೂ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಅಕ್ಟೋಬರ್ 31ರ ರಾತ್ರಿ 9.30ರ ಸುಮಾರಿಗೆ ಕಾರ್ಖಾನೆಯ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿ ಮೂರನೇ ಮಹಡಿಯವರೆಗೂ ವ್ಯಾಪಿಸಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.ಘಟನೆ ವೇಳೆ ಕಾರ್ಖಾನೆಯಲ್ಲಿದ್ದ 20ರಿಂದ 25 ಮಂದಿಯಲ್ಲಿ ಬಹುತೇಕರು ಹೊರಬಂದಿದ್ದಾರೆ. ಆರು ಮಂದಿ ಒಳಗೆ ಸಿಲುಕಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾದರಕ್ಷೆ ತಯಾರಿಕೆಗೆ ಬಳಸುವ ರಾಸಾಯನಿಕಗಳಿಂದ ಬೆಂಕಿ ವೇಗವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ.