ಚೆನ್ನೈ: ತಮಿಳುನಾಡಿನ ಥೇಣಿ ಜಿಲ್ಲೆಯ ಉಪಜೈಲಿನಿಂದ 17 ವಿಚಾರಣಾಧೀನ ಖೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕರ್ತವ್ಯ ನಿರ್ಲಕ್ಷ್ಯ ಮತ್ತು ಭದ್ರತಾ ಲೋಪದ ಆರೋಪದ ಹಿನ್ನೆಲೆಯಲ್ಲಿ ಉಪಜೈಲಿನ ಪ್ರಭಾರ ಉಪ ಜೈಲರ್ ಅವರನ್ನು ಅಮಾನತುಗೊಳಿಸಲಾಗಿದ್ದು, ಜೈಲು ಇಲಾಖೆಯ ಹಲವು ಹಿರಿಯ ಅಧಿಕಾರಿಗಳ ವರ್ಗಾವಣೆಗೂ ಆದೇಶಿಸಲಾಗಿದೆ.ಅಕ್ಟೋಬರ್ 26ರಂದು ಥೇಣಿ ಜಿಲ್ಲೆಯ ಉಪಜೈಲಿನಲ್ಲಿ ಈ ಘಟನೆ ನಡೆದಿತ್ತು. ವೈದ್ಯಕೀಯ ತುರ್ತು ಪರಿಸ್ಥಿತಿಯ ನಾಟಕವಾಡಿದ 17 ವಿಚಾರಣಾಧೀನ ಖೈದಿಗಳು, ಕರ್ತವ್ಯದಲ್ಲಿದ್ದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾಗಿದ್ದರು. ಈ ಘಟನೆ ರಾಜ್ಯದ ಜೈಲು ಭದ್ರತಾ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.ಘಟನೆ ನಡೆದ ತಕ್ಷಣ ತಮಿಳುನಾಡು ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಹಲವು ಪೊಲೀಸ್ ತಂಡಗಳನ್ನು ರಚಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ಡ್ರೋನ್‌ಗಳ ನೆರವಿನಿಂದ ಜೈಲಿನಿಂದ ದೂರದ ಪೊದೆಗಳಲ್ಲಿ ಅಡಗಿದ್ದ ಎಂಟು ಖೈದಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿತ್ತು. ಬಳಿಕ ಪರಾರಿಯಾಗಿದ್ದ ಎಲ್ಲಾ 17 ಖೈದಿಗಳನ್ನು ಮತ್ತೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ವಿಜಯ್, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಥೇಣಿ ಜಿಲ್ಲಾ ಉಪಜೈಲಿನ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದ ಉಪ ಜೈಲರ್ ಎನ್. ನಾಗೇಶ್ವರನ್ ಅವರನ್ನು ಅಕ್ಟೋಬರ್ 30ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. 2024ರ ಆಗಸ್ಟ್ 6ರಿಂದ ಅವರು ಈ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಖೈದಿಗಳು ಮತ್ತು ಸಿಬ್ಬಂದಿಯ ಮೇಲೆ ಸರಿಯಾದ ನಿಗಾ ಹಾಗೂ ಮೇಲ್ವಿಚಾರಣೆ ವಹಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಅವರ ಮೇಲಿದೆ.ಇದರ ಜೊತೆಗೆ ಮಧುರೈ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿದ್ದ ಆರ್. ಕೃಷ್ಣರಾಜ್ ಅವರನ್ನು ಸೇಲಂ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.ಜೈಲು ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಸಂದೀಪ್ ರೈ ರಾಥೋಡ್ ಅವರನ್ನು ಟ್ಯಾಂಜೆಡ್ಕೊ ಸಂಸ್ಥೆಯ ಮುಖ್ಯ ಜಾಗೃತ ಅಧಿಕಾರಿಯಾಗಿ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಕೆ. ಶಂಕರ್ ಅವರನ್ನು ಜೈಲು ಮತ್ತು ಸುಧಾರಣಾ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.ಜೈಲು ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿತನ ತೋರಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ವಿಜಯ್ ಎಚ್ಚರಿಕೆ ನೀಡಿದ್ದಾರೆ.